ರೇಷ್ಮೆ ಪತಂಗ
ಲೆಪಿಡಾಪ್ಟಿರ ವರ್ಗದ, ಬಾಂಬಿಸಿಡೀ ಕುಟುಂಬದ ಒಂದು ಪ್ರಭೇದ (ಸಿಲ್ಕ್ ಮಾತ್). ವೈಜ್ಞಾನಿಕ ಹೆಸರು ಬಾಂಬಿಕ್ಸ್ ಮೋರಿ. ವಾಣಿಜ್ಯರೇಷ್ಮೆಗೆ ಇದು ಮೂಲ. ಬಾಂಬಿಕ್ಸ್ ಮೀಯಾಂಡಿರೈನ ಎಂಬುದು ಕಾಡು ಪ್ರಭೇದ. ಈ ಪ್ರಭೇದದಿಂದ ಬಾಂಬಿಕ್ಸ್ ಮೋರಿ  ವಿಕಾಸಗೊಂಡಿರುವುದಾಗಿ ಊಹೆ. ನವುರಾದ ರೇಷ್ಮೆಎಳೆಗಳನ್ನು ಸೃಷ್ಟಿಸುವ ಈ ಕೀಟವನ್ನು ಮನುಷ್ಯ ಹಲವು ಶತಮಾನಗಳ ಹಿಂದಿನಿಂದ ಲೇ ತನ್ನ ವಶಕ್ಕೆ ತೆಗೆದುಕೊಂಡು ಪ್ರಪಂಚದ ವಿವಿಧ ಭಾಗಗಳಲ್ಲಿ ರೇಷ್ಮೆಕೃಷಿ ಮಾಡುತ್ತಿದ್ದಾನೆ.

ಪ್ರೌಢಕೀಟದ (ಚಿಟ್ಟೆ) ರೆಕ್ಕೆಗಳು 40-50 ಮಿಮೀನಷ್ಟು ಉದ್ದವಾಗಿರು ವುವು. ಮೈ ಮೇಲೆಲ್ಲ ಶಲ್ಕಗಳಿವೆ. ಪತಂಗಗಳು ಪ್ರೌಢಾವಸ್ಥೆಯಲ್ಲಿ ಆಹಾರ ಸೇವಿಸಲಾರವು ಮತ್ತು ಹಾರಲಾರವು. ರಚನೆಯಲ್ಲಿ ಇವು ಇನ್ನಿತರ ಕೀಟಗಳನ್ನು ಹೋಲುತ್ತವೆ. ತಲೆಯ ಮುಂಭಾಗದಲ್ಲಿ ಎರಡು ಕುಡಿಮೀಸೆಗಳುಂಟು. ಗಂಡಿನ ಕುಡಿಮೀಸೆಯಲ್ಲಿ ಹೆಣ್ಣಿನ ಕುಡಿಮೀಸೆ ಯಲ್ಲಿರುವುದಕ್ಕಿಂತಲೂ ಹೆಚ್ಚಿನ ಕವಲುಗಳಿದ್ದು ಕುಂಚದಂತಿರುತ್ತವೆ. ಒಂದು ಜೊತೆ ಸಂಕೀರ್ಣ ಕಣ್ಣುಗಳಿರುವುದಾದರೂ ದೃಷ್ಟಿಸಾಮರ್ಥ್ಯ ಇಲ್ಲ. ವದನಾಂಗಗಳ ಬೆಳೆವಣಿಗೆಯೂ ಅಪೂರ್ಣ. ಗಾತ್ರದಲ್ಲಿ ಹೆಣ್ಣಿಗಿಂತ ಗಂಡು ಚಿಕ್ಕದು. ಗಂಡಿನ ಹಿಂಭಾಗದಲ್ಲಿ ಎರಡು ಕೊಂಡಿಯಾಕಾರದ ಹಿಡಿಕೆಗಳಿವೆ. ಇವು ಹೆಣ್ಣುಗಂಡಿನ ಮಿಲನಕ್ಕೆ ಸಹಾಯಕ. ಗೂಡಿನಿಂದ ಹೊರಬಂದ ಪತಂಗಗಳು ಕೂಡಲೇ ಪ್ರಣಯವನ್ನಾರಂಭಿಸಿ ಜೊತೆಗೂಡುತ್ತವೆ. ದಿವಸಗಟ್ಟಲೆ ಇವು ಸಂಭೋಗ ನಡಸಬಲ್ಲವು. ಅದರೆ ನಾಲ್ಕು ಗಂಟೆಗಳ ಬಳಿಕ ಅವನ್ನು ಬೇರ್ಪಡಿಸಿ ಹೆಣ್ಣಿಗೆ ಮೊಟ್ಟೆಯಿಡಲು ಅವಕಾಶ ಮಾಡಿಕೊಡಲಾಗುತ್ತದೆ. ಗಂಡು ಹೆಣ್ಣು ಪತಂಗಗಳು ಒಂದು ಗೂಡಿದ ಬಳಿಕ ಹೆಣ್ಣುಪತಂಗ 400-500 ಮೊಟ್ಟೆಗಳನ್ನಿಡುತ್ತದೆ. ಸುಮಾರು 10 ದಿನಗಳಲ್ಲಿ ಮೊಟ್ಟೆಯೊಡೆದು ಮರಿಹುಳು (ಲಾರ್ವ) ಹೊರಬರುತ್ತದೆ. ಮೊಟ್ಟೆಅವಸ್ಥೆಯ ಅವಧಿಯಲ್ಲಿ ಉಷ್ಣತೆ 21-260ಸೆ. ಲಾರ್ವ ತನ್ನ ಜೀವಿತಾವಧಿಯಲ್ಲಿ ಅಧಿಕ ಪರಿಮಾಣದಲ್ಲಿ ಹಿಪ್ಪುನೇರಿಳೆ ಎಲೆಯನ್ನು ತಿನ್ನುತ್ತದೆ. ಅದು 30-45 ದಿವಸಗಳ ಅವಧಿಯಲ್ಲಿ ನಾಲ್ಕು ಬಾರಿ ಪೊರೆಕಳಚಿಕೊಂಡು ಐದು ಹಂತಗಳಲ್ಲಿ ಬೆಳೆದು ಗರಿಷ್ಠ 75 ಮಿಮೀ ಉದ್ದಕ್ಕೆ ಬೆಳೆಯುತ್ತದೆ. ಲಾರ್ವಕ್ಕೆ ತನ್ನದೇ ಗುಣಾತ್ಮಕವಾದ ಬಾಲದ ಕೊಂಡಿ ಇರುತ್ತದೆ. ಐದನೆಯ ಹಂತದ ಕೊನೆಯಲ್ಲಿ ಎಲೆ ತಿನ್ನುವುದನ್ನು ಬಿಟ್ಟು ಬಿಳಿ ಇಲ್ಲವೆ ಹಳದಿ ಅಥವಾ ಹಸುರು ಬಣ್ಣದ ಒಂದೇ ರೇಷ್ಮೆ ಎಳೆಯಿಂದ ಗೂಡು ಕಟ್ಟಲು ಪ್ರಾರಂಭಿಸುತ್ತದೆ. ರೇಷ್ಮೆಎಳೆಯ ತಿರುಳಿನ ಭಾಗ ಫೈಬ್ರಾಯಿನ್ ಎಂಬ ಪ್ರೋಟೀನ್ ನಿಂದಲೂ ಹೊರಕವಚ ಮೇಣದಂತದ ಸೆರಸಿನ್ ಎಂಬ ಪ್ರೋಟೀನಿನಿಂದಲೂ ರಚಿತವಾಗಿರುತ್ತದೆ. ಹುಳುವಿನ ಸೂಕ್ಷ್ಮ ಮತ್ತು ಪ್ರಮುಖವಾದ ಅವಧಿಯಲ್ಲಿ ರೇಷ್ಮೆಗೂಡು (ಕಕೂನ್) ರಕ್ಷಣೆ ಒದಗಿಸುತ್ತದೆ. ಸಾಮಾನ್ಯವಾಗಿ, ರೇಷ್ಮೆಎಳೆ 700-1000 ಮೀಟರ್ ಉದ್ದವಾಗಿರುತ್ತದೆ. ಗೂಡಿನಲ್ಲಿ ಲಾರ್ವ ಕೋಶವಾಗಿ (ಪ್ಯೂಪ) ಪರಿವರ್ತನೆ ಹೊಂದುತ್ತದೆ. ಈ ಕೋಶ ಹಲವು ದಿವಸಗಳ ಬಳಿಕ ಪತಂಗವಾಗಿ ರೂಪ ಪರಿವರ್ತನೆಗೊಂಡು ಸಾಮಾನ್ಯವಾಗಿ ಸೂರ್ಯೋದಯದ ವೇಳೆ ಗೂಡಿನಿಂದ ಹೊರಬರುತ್ತದೆ. 

ನೀರಾವಿ ಅಥವಾ ಬಿಸಿಗಾಳಿಯಿಂದ ಗೂಡಿನಲ್ಲಿರುವ ಡಿಂಬವನ್ನು ಸಾಯಿಸಿ ರೇಷ್ಮೆಎಳೆಯನ್ನು ಬೇರ್ಪಡಿಸಿ ವಾಣಿಜ್ಯೋಪಯೋಗಕ್ಕೆ ಬಳಸಿ ಕೊಳ್ಳಲಾಗುವುದು. ದೈತ್ಯಾಕಾರದ ರೇಷ್ಮಪತಂಗ ಸಾಟುರಿನಿಡೀ ಕುಟುಂಬಕ್ಕೆ ಸೇರಿದೆ.

	    ರೇಷ್ಮೆ ಪತಂಗಗಳಲ್ಲಿ ನಾಲ್ಕು ವಿಧಗಳಿವೆ : ಹಿಪ್ಪುನೇರಳೆ, ಟಸ್ಸಾರ್, ಎರಿ ಮತ್ತು ಮೂಗಾ. ಪ್ರಪಂಚದಲ್ಲಿ ಭಾರತವೊಂದೇ ಈ ನಾಲ್ಕೂ ಬಗೆಯ ರೇಷ್ಮೆಯನ್ನು ಉತ್ಪಾದಿಸುತ್ತಿದೆ.			
			
(ಪಿ.ಆರ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ